ನಮ್ಮ ಪಕ್ಕದಲ್ಲೇ ಓಡಿ ಓಡಿಯೂ ನಮ್ಮನ್ನು ಮುಟ್ಟಲಾಗದೆ ಹಿಂದುಳಿದ ಮರಗಳು, ಒಂಟಿ ದೋಣಿಯಲ್ಲಿ ಕೂತು ಓಡುತ್ತಿರುವ ರೈಲನ್ನೆ ನೋಡುತ್ತಾ ತನ್ನೊಳಗೇ ಕಳೆದು ಹೋದಂತಿರುವ ಮೀನುಗಾರ, ಟ್ರೇನು ಯಾಕಿನ್ನು ಬರಲಿಲ್ಲವೆಂದು ಪದೇ ಪದೇ ಇಣುಕಿ ನೋಡುವ ಪ್ರಯಾಣಿಕ, ಒಳಗೆ ಕೂತು ಹೊರಗಿನ ಪ್ರಪಂಚವನ್ನು ತನ್ನ ಆಲೋಚನೆಗಳಿಗೆ ಸರಿತೂಗಿಸಿ ನೋಡುವಾಗಲೇ ಚಾದರ ಹೊದಿಸಿದ ಹಾಗೆ ಮೇಲೆ ಬೀಳುವ ಕತ್ತಲು. ಟ್ರೇನ್ ಹತ್ತಿ ಮೂರು ವರ್ಷಗಳಾದವು. ಅಲ್ಲಿ ಸಿಗುವ ಕತೆ, ವ್ಯಕ್ತಿಚಿತ್ರಗಳು ನನ್ನನ್ನು ಯಾವಾಗಲೂ ಕಾಡುತ್ತಿದ್ದವು. ಬಾಗಿಲ ಹತ್ತಿರ ಬೀಸುವ ಗಾಳಿಗೆ ಮುಖವೊಡ್ಡಿ ಗಂಟೆಗಟ್ಟಲೆ ಹರಟುತ್ತಿದ್ದೆವು. ಎದುರು ಕೂತವರನ್ನೆಲ್ಲ ಪರಿಚಯಿಸಿಕೊಂಡು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಎಲ್ಲರಿಗೂ ಬೋರ್ ಹೊಡೆಸುತ್ತಿದ್ದೆವು. ಮದುವೆಯಾಗಿ 5 ವರ್ಷಗಳಲ್ಲಿ ನಾವು Jab we met ಸ್ಟೈಲ್ನಲ್ಲಿ ಓಡಿ ಬಂದು ಹೊರಟ ಟ್ರೇನ್ ಹತ್ತಿದ್ದೇ ಹೆಚ್ಚು. ಅದೂ ಒಂದು ಚೆಂದದ ನೆನಪು. ಈಗ ಮತ್ತೆ ಎಲ್ಲ ನೆನಪಾಗುತ್ತಿದೆ.
Fleeting thoughts in snippets.